ಸದಾಶಿವನಾಯಕ
	ಕೆಳದಿ ವಂಶದ ಎರಡನೆಯ ಅರಸು (ಸು. 1530-67). ಚೌಡಪ್ಪ ಮತ್ತು ತಿರುಮಮ್ಮ ದಂಪತಿಗಳ ಮಗ. ವಿಜಯ ನಗರದ ರಾಮರಾಯನ ಆದೇಶದಂತೆ ಈತ ಬಿಜಾಪುರದ ಆದಿಲ್ ಷಾನ ವಿರುದ್ಧ ಸೆಣಸಿದ. ಅವನನ್ನು ಯುದ್ಧದಲ್ಲಿ ಸೋಲಿಸಿದ್ದಲ್ಲದೆ ಮುಂದೆ ಕಲ್ಯಾಣದ ಕೋಟೆಯನ್ನೂ ಗೆದ್ದ (ಸು. 1549). ಈ ಯಶಸ್ಸಿನಿಂದ ಸಂತೃಪ್ತನಾದ ರಾಮರಾಯ ಸದಾಶಿವನಾಯಕನಿಗೆ ರಾಮನಾಯಕ ಮತ್ತು ಕೋಟೆಕೋಲಾಹಲ ಎನ್ನುವ ಬಿರುದುಗಳನ್ನು ಕೊಟ್ಟು ಇವನನ್ನು ಚಂದ್ರಗುತ್ತಿ, ಬಾರಕೂರು ಮತ್ತು ಮಂಗಳೂರುಗಳಿಗೆ ಸುಬೇದಾರನನ್ನಾಗಿ ನೇಮಿಸಿದ.

	ರಾಮರಾಯ ಮತ್ತೊಮ್ಮೆ ಸದಾಶಿವನಾಯಕನನ್ನು ಬಿದರೆಯ ಸುಲ್ತಾನನ ವಿರುದ್ಧ ಯುದ್ಧಕ್ಕೆ ಕಳಿಸಿದ. ಈ ಯುದ್ಧದಲ್ಲಿ ಜಯ ಗಳಿಸಿದ್ದಕ್ಕೆ ಸದಾಶಿವನಿಗೆ ಅರಸನಿಂದ ಶತ್ರುಸಪ್ತಾಂಗಹರಣನೆನ್ನುವ ಬಿರುದು ಮತ್ತು ಅರುಣಧ್ವಜ, ವಾದ್ಯಪಂಚಕವೆನ್ನುವ ಬಹುಮಾನಗಳು ದೊರೆತವು ಎಂದು ಶಿವತತ್ತ್ವರತ್ನಾಕರ ಎಂಬ ಗ್ರಂಥ ತಿಳಿಸುತ್ತದೆ.  ತರುವಾಯ ರಾಮರಾಯ ಇವನನ್ನು ತುಳುನಾಡು ಮತ್ತು ಕೇರಳಗಳಲ್ಲಿಯ ದಂಗೆಕೋರರನ್ನು ಸದೆಬಡಿಯಲು ಕಳಿಸಿದ. ಸದಾಶಿವನಾಯಕ ಬಂಕಾಪುರದ ಮಾದರಸನನ್ನು ಸೆರೆಹಿಡಿದು ಕೆಳದಿ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ. ಇವನ ಕಾಲದಲ್ಲಿ ರಾಜ್ಯ ವಿಸ್ತಾರವಾಯಿತು. 1563ರ ಒಂದು ಶಾಸನದಿಂದ ಇವನ ರಾಜ್ಯ ಆರಗ, ಬಾರಕೂರು, ಮಂಗಳೂರು ಸೀಮೆಗಳನ್ನು ಒಳಗೊಂಡಿತ್ತೆಂದು ಗೊತ್ತಾಗುತ್ತದೆ. ಈತ ಕೆಳದಿ, ಇಕ್ಕೇರಿ, ಕವಲೆದುರ್ಗ ಮುಂತಾದ ಕಡೆಗಳಲ್ಲಿ ಕೋಟೆಗಳನ್ನು ಕಟ್ಟಿಸಿದ. ರಾಜಧಾನಿಯನ್ನು ಕೆಳದಿಯಿಂದ ಇಕ್ಕೇರಿಗೆ ವರ್ಗಾಯಿಸಿದ.

	ಸದಾಶಿವನಾಯಕ ಮಹಾಯೋಧನಷ್ಟೇ ಅಲ್ಲದೆ ಧಾರ್ಮಿಕ ಸಂಸ್ಥೆಗಳ ರಕ್ಷಕನೂ ಪ್ರಜಾಹಿತತತ್ಪರನೂ ಆಗಿದ್ದ. ಶಿವಭಕ್ತನಾಗಿದ್ದ ಈತ ಜಂಗ ಮರಿಗೆ ಅನೇಕ ದಾನಗಳನ್ನು ಮಾಡಿದ. ಕುಶಾವತಿ ನದೀತೀರದ ಮೇಲೆ ಸದಾಶಿವಪುರ ಅಗ್ರಹಾರವನ್ನು ನಿರ್ಮಿಸಿ, ಅದರಲ್ಲಿ ಶ್ರೋತ್ರೀಯ ಬ್ರಾಹ್ಮಣರಿಗೆ ವೃತ್ತಿಸ್ವಾಸ್ಥ್ಯಗಳನ್ನು ಕೊಟ್ಟ. ಇಕ್ಕೇರಿಯಲ್ಲಿ ಈಶ್ವರ ದೇವಾಲಯವನ್ನು ಕಟ್ಟಿಸಿದ.  ಕೆಳದಿಯ ರಾಮೇಶ್ವರ ದೇವಸ್ಥಾನದಲ್ಲಿ ನಂದಿಮಂಟಪವನ್ನು ಕಟ್ಟಿಸಿ ಪಾರ್ವತಿದೇವಿಯ ಪ್ರತಿಮೆಯನ್ನು ಪ್ರತಿಷ್ಠೆ ಮಾಡಿಸಿದ. ಕೆಳದಿಯಲ್ಲಿ ಜಂಗಮಮಠವನ್ನು ಕಟ್ಟಿಸಿದ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒಂದು ಗ್ರಾಮವನ್ನು ದಾನ ಮಾಡಿದ. 1557ರ ಶಾಸನದಿಂದ ಈತ ಜೈನರಿಗೂ ಭೂದಾನ ಮಾಡಿದ ಸಂಗತಿ ತಿಳಿಯುತ್ತದೆ. ಒಟ್ಟಿನಲ್ಲಿ ಈತ ಕೆಳದಿ ರಾಜ್ಯಕ್ಕೆ ಭದ್ರ ಬುನಾದಿ ಹಾಕಿದನಲ್ಲದೆ, ವಿಜಯನಗರ ಸಾಮ್ರಾಜ್ಯದ ಸಂರಕ್ಷಣೆಯ ಕಾರ್ಯದಲ್ಲಿ ವಿಶೇಷ ಸೇವೆ ಸಲ್ಲಿಸಿದ.					
	(ಜಿ.ಎಸ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ